ಎಲುಬಿನ ರೋಗಗಳು, ಗಾಯಗಳು 

	ಎಲುಬಿನ ರೋಗಗಳು ಅನೇಕ ರೋಗದ ಕಾರಣಗಳೂ ಅನೇಕಾನೇಕ. ಆನುವಂಶಿಕ, ಸಂಜಾತ, ಸೋಂಕು, ಅಪೌಷ್ಠಿಕತೆ, ಗಂತಿಗಳು ಎಲುಬಿನ ರೋಗದ ಕಾರಣಗಳಾಗಬಹುದು. ಕೆಲವು ರೋಗಗಳನ್ನು ತಡೆಗಟ್ಟಬಹುದು, ಕೆಲವುಗಳನ್ನು ಚಿಕಿತ್ಸೆಯಿಂದ ಗುಣಪಡಿಸಬಹುದು. ಕೆಲವು ರೋಗಗಳು ಇಲ್ಲಿವರೆಗೆ ವಿಜ್ಞಾನಿಗಳ, ವೈದ್ಯರ ವಶಕ್ಕೆ ಬಂದಿಲ್ಲ. ಎಲುಬುಗಳು ರೋಗಕ್ಕೆ ತುತ್ತಾದಾಗ ವಿಕಲತೆ ಉಂಟಾಗುತ್ತದೆ. ವಿಕಲತೆ ಎದ್ದು ಕಾಣುವಂತಾದರೆ ಅಂತಹ ವ್ಯಕ್ತಿಗಳ ದೈಹಿಕ ಸಾಮಥ್ರ್ಯ ಕಡಿಮೆಯಾಗುತ್ತದೆ. ಇವರು ಸಹಜವಾಗಿಯೇ ಮಾನಸಿಕ ಗೊಂದಲಕ್ಕೊಳಗಾಗುತ್ತಾರೆ. 

	ಆನುವಂಶಿಕವಾಗಿ ಕಾಣುವ ಹಲವಾರು ರೋಗಗಳು ಎಲುಬುಗಳಲ್ಲಿ ನ್ಯೂನತೆಯುಂಟು ಮಾಡಿ ವಿಕಲತೆಗೆ ಕಾರಣವಾಗುತ್ತವೆ. ಕೆಲವು ರೋಗಗಳು ಜನನದೊಂದಿಗೆ ಕಂಡರೆ ಕೆಲವು ರೋಗಗಳು ಮೂರು, ನಾಲ್ಕರ ದಶಕದಲ್ಲಿ ಹೊರಬೀಳುತ್ತವೆ. ಲಟ್ಟಪಾದ, ಚಪ್ಪೆಕೀಲತಪ್ಪಿಕೆ, ಎಲುಜನಕ ನ್ಯೂನತೆಗಳು ಮಗುವಿನ ಜನನದೊಂದಿಗೆ ಕಾಣಿಸುವಂಥವುಗಳು. ರುಮಟಾಯ್ಡ್ ಕೀಲುರಿತ, ಆಂಕಿಲೋಸಿಂಗ ಸ್ಪಾಂಡಿಲೈಟಿಸ ಮೂರು ಅಥವಾ ನಾಲ್ಕರ ದಶಕದಲ್ಲಿ ಕಾಣುವಂತವುಗಳು. ತಲೆತಲಾಂತರಕ್ಕೆ ಬಿಡದೆ ಕಾಡುವ ರೋಗಗಳು ಪ್ರಬಲ (ಡಾಮಿನೆಂಟ) ವೆಂದು, ಒಂದೊಂದು ತಲೆ ಬಿಟ್ಟು ಬಿಟ್ಟು ಕಾಣುವ ರೋಗಗಳು ಹಿಂಸರಿಕ (ರಿಸೆಸಿವ) ಸ್ವರೂಪದ್ದೆಂದು ಗುರುತಿಸಿದ್ದಾರೆ.

	ಗರ್ಭದಲ್ಲಿ ಪಿಂಡ ಬೆಳೆಯುವ ಮೊದಲ ಮೂರು ತಿಂಗಳ ಸಮಯದಲ್ಲಿ ತಾಯಿ ಕೆಲವೊಂದು ಔಷಧಗಳನ್ನು ಸೇವಿಸಿದರೆ, ಎಕ್ಸ್ ಕಿರಣ ಅಥವಾ ಇನ್ನಿತರ ವಿಕಿರಣತೆಗೆ ಒಳ ಪಟ್ಟರೆ ಹುಟ್ಟುವ ಮಗು ವಿಕಲವಾಗುವ ಸಂಭವ ಇದೆ. ವಿಕಲತೆಯ ಸ್ವರೂಪ ಬಹು ವಿಧವಾಗಿ ಕಾಣಿಸಿಕೊಳ್ಳಬಹುದು. ಅಂಗಭಾಗದ ಕೊರತೆ ಇರುವುದೇ ಹೆಚ್ಚು. ಕೆಲವೊಮ್ಮೆ ಹೆಚ್ಚಿನ ಅಂಗಭಾಗ ಕಾಣಿಸಿಕೊಳ್ಳಲೂಬಹುದು.

	ಸಂಶೋಧನೆ ಮುಂದುವರೆದಂತೆ ವಿಕಲತೆಯುಂಟುಮಾಡುವ ಕಾರಣ ಕಂಡುಕೊಳ್ಳಲು ಸಾಧ್ಯವಾಗುತ್ತಿದೆ. ವರ್ಣದಂಡಗಳ (ಕ್ರೋಮೋಸೋಮ್ಸ್)ಲ್ಲಿಯ ನ್ಯೂನತೆ ಕಂಡು ಸರಿಪಡಿಸುವ ಪ್ರಯತ್ನಗಳು ನಡೆದಿವೆ ಹೀಗಾಗಿ ಮುಂದೊಂದು ದಿನ ಆನುವಂಶಿಕ ರೋಗಗಳು ಕಾಣುವುದು ಕಷ್ಟವಾಗಬಹುದು. ಸಂಜಾತ ರೋಗಗಳ ಕಾರಣಗಳು ಗೊತ್ತಾಗುತ್ತಿರುವುದರಿಂದಾಗಿ ಅವುಗಳನ್ನು ಸಹ ತಡೆಗಟ್ಟಲು ಪ್ರಯತ್ನಗಳು ನಡೆದಿವೆ. ಕಂಡುಬಂದ ವಿಕಲತೆಗಳಲ್ಲಿ ಕೆಲವುಗಳನ್ನು ಚಿಕಿತ್ಸೆಯಿಂದ ಸರಿಪಡಿಸಬಹುದು.

	ಸಣ್ಣ ಪೆಟ್ಟು ತಗುಲಿದರೆ ಸುಲಭವಾಗಿ ಸೀಳುವ, ಮುರಿಯುವ ಮೂಳೆಗಳೊಂದಿಗೆ ಮಗುವಿನ ಜನನವಾಗಬಹುದು. ಇಂತಹದು ಮಗು ಬೆಳೆಯುವಾಗ ಸಹ ಕಾಣಿಸಿಕೊಳ್ಳಬಹುದು. ಇದಕ್ಕೆ “ಎಲುಜನನ ನ್ಯೂನತೆ” (ಆಸ್ಪಿಯೋಜನಿಸಿಸ್ ಇಂಪರ್ಪೆಕ್ಟ) ಎನ್ನುತ್ತಾರೆ. ಕೆಲವೊಮ್ಮೆ ಎಲುಬಿನೊಳಗಣ ಮಜ್ಜೆಯ ಭಾಗವೆಲ್ಲ ಗಟ್ಟಿಗಡುಸಾಗಿ ಹಾಲುಗಲ್ಲಿನಂತಾಗಿರುತ್ತದೆ. ಇವು ಸಹ ಸ್ವಲ್ಪ ಪೆಟ್ಟಿನಿಂದಾಗಿ ಮುರಿಯುತ್ತವೆ. ಇದಕ್ಕೆ ಎಲುಕಲ್ಲು ರೋಗ (ಆಸ್ಬಿಯೋ ಪೆಟ್ರೋಸಿಸ್ ಅನ್ನುತ್ತಾರೆ. ಮೂಳೆಯ ಬದಲಾಗಿ ಮೆತುವಾದ ತಂತುವಿನ ಊತಕ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಫೈಬ್ರಸಡಿಸಪ್ಲೇಸಿಯ ಎನ್ನುತ್ತಾರೆ.
ಕೆಲವೊಮ್ಮೆ ಮೇಲೆಲುಮೊಳೆ (ಎಪಿಫೈಸಿಸ್) ಉರಿತಕ್ಕೊಳಗಾಗಿ ಅದರ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಲೆಗ್-ಪಿರ್ಥಿ ರೋಗದಲ್ಲಿ ತೊಡೆಲುತಲೆಯ ಮೇಲೆಲುಮೊಳೆ ಉರಿತಕ್ಕೊಳಗಾಗಿ ಚಪ್ಪೆ ಕೀಲನ್ನು ಹಾಳುಗೆಡುವುದುಂಟು. ಇಂತಹ ನ್ಯೂನತೆ ಇನ್ನೂ ಆನೇಕ ಬೆಳೆವಮೂಳೆಗಳಲ್ಲಿ ಕಂಡುಬರುತ್ತವೆ. ಒಮ್ಮೊಮ್ಮೆ ಬೆಳೆದ ಮೂಳೆ ನಿಧಾನವಾಗಿ ಕರಗುವದನ್ನೂ ಕಾಣಬಹುದು. ಇದಕ್ಕೆ ಮೂಳೆಲಯ (ಆಸ್ಟಿಯೋಲೈಸಿಸ್) ಎನ್ನುತ್ತಾರೆ.

ಚಪ್ಪೆಕೀಲಿನೆಲವುಗಳು ತಮ್ಮ ಸಹಜರೂಪದಿಂದ ವಂಚಿತವಾದ ಮಗುವಿನಲ್ಲಿ ಚಪ್ಪೆಕೀಲ್ತಪ್ಪಿಕೆಯುಂಟು ಮಾಡುತ್ತವೆ. ಲಟ್ಟಪಾದ, ತಾಗುಮಂಡಿ, ಪಂಗಡಕಾಲುಗಳು ಸಾಮಾನ್ಯವಾಗಿ ಕಾಣುವ ಮೂಳೆಯ ಊನಗಳು. ಅನೇಕ ಊನಗಳನ್ನು ಸಣ್ಣದರಲ್ಲೇ ಗುರುತಿಸಿ ಚಿಕಿತ್ಸೆ ನೀಡಿದರೆ ಒಳ್ಳೆಯ ಫಲ ಸಿಗುತ್ತದೆ.

ಜೀವಸ್ತುಕರಣದ ಏರುಪೇರುಗಳು: ಮೈಯಲ್ಲಿಯ ಮೂಳೆಗಳಲ್ಲಿ ಜೀವ ಇರುತ್ತದೆ ಎಡೆಬಿಡದೆ ಒಂದೆಡೆ ಮೂಳೆ ಹಾಳಾಗುತ್ತಿದ್ದರೆ ಇನ್ನೊಂದೆಡೆ ಅದೇ ಹೊತ್ತಿನಲ್ಲಿ ಹೊಸ ಮೂಳೆ ಚುರುಕಾಗಿ ಬೆಳೆಯುತ್ತಿರುತ್ತದೆ. ಆರೋಗ್ಯವಂತರಲ್ಲಿ ಇವೆರಡು ಕೆಲಸಗಳು ಸಮಸಮವಾಗಿರುತ್ತವೆ. ಜೀವಸ್ತುಕರಣ ಕ್ರಿಯೆ ಕೆಡಿಸುವ ರೋಗಗಳ ಪ್ರಭಾವ ಎಲುಗಟ್ಟಿನ ಮೇಲೂ ಆಗುತ್ತದೆ. ಸಿ ಮತ್ತು ಡಿ ಜೀವಸತ್ವಗಳ ಕೊರತೆಯಲ್ಲಿ ಕ್ರಮವಾಗಿ ನೀಚಗೊರೆ (ಸ್ಕರ್ವಿ). ಎಲುಮುರುಟು (ರಿಕೆಟ್ಸ್) ಕಾಣಿಸಿಕೊಳ್ಳುತ್ತವೆ. ಗುರಾಣಿಕ (ತೈರಾಯ್ಡ್) ಬದಿಗುರಾಣಿಕ (ಪ್ಯಾರಾ ತೈರಾಯ್ಡ್) ಗ್ರಂಥಿ, ಮೂತ್ರಪಿಂಡ, ಜಠರಗರುಳಿನ ನಾಳ, ಅಡ್ರಿನಲ್ ಗ್ರಂಥಿüಗಳ ಕೆಲಸ ಕೆಟ್ಟರೆ ಮೂಳೆಯಲ್ಲಿ ಬದಲಾವಣೆ ಕಾಣಬಹುದು. ಇಷ್ಟೇಅಲ್ಲ ಯಾವುದೇ ಕಾರಣದಿಂದಾಗಿ ವ್ಯಕ್ತಿ ಒಡಾಡದೆ ಹಾಸಿಗೆ ಹಿಡಿದರೆ ಮೂಳೆಗಳು ಮೆತ್ತಗಾಗುತ್ತವೆ. 

	ಮೈ ಕಟ್ಟಿನಲ್ಲಿ ಆದ ಏರುಪೇರು ಕಂಡಹಾಗೆ, ಎಲುಗಟ್ಟಿನ ಸಹಜ ನಿಜಗೆಲಸ ಕೆಡುವುದಿಲ್ಲ. ಮರುರಚನೆಗು, ಹಾಳುಗೆಡುವದಕ್ಕು ನಡುವಣ ಪರಿಮಾಣ ಬದಲಾದ ಹಾಗೆಲ್ಲ ಕೊನೆಗೆ ಉಳಿವ ಮೂಳೆಯ ಮೊತ್ತವು ಕಡಮೆ ಆಗುವದನ್ನು ಬಿಟ್ಟರೆ ಮೂಳೆಗೆ ವಯಸ್ಸು ಏನೂತಟ್ಟದು. ಮೂಳೆಯ ರಸಾಯನಿಕ ಸಂಯೋಜನೆ ಒಂದೇ ಸಮನಾಗಿದ್ದರೂ ಇಡೀ ಎಲುಗಟ್ಟು ಹಗುರವೂ ಕೋಮಲವೂ ಆಗುವುದು. ಹೀಗಾಗಿ ವಯಸ್ಸಾದವರ ಮೂಳೆ ಸುಲಭವಾಗಿ ಲೊಟಕ್ಕೆಂದು ಮುರಿಯುವವು ಮತ್ತು ಮುರಿತವು ತನ್ನಷ್ಟಕ್ಕೆ ತಾನೇ ಸರಿಹೊಂದುತ್ತವೆ. 

ಸೋಂಕು : ಎಲುಬಿನ ಸೋಂಕು ರೋಗಕ್ಕೆ ಎಲುಮಜ್ಜೆಯುರಿತ (ಆಸ್ಪಿಯೋ ಮೈಲೈಟಿಸ್) ಎನ್ನುತ್ತಾರೆ. ಕೀವು ಸೃಜಿಸುವ ರೋಗಾಣುಗಳಾದ ಸ್ಪ್ರೆಪ್ಟ್ರೋಕಾಕೈ, ಸ್ಟ್ಸಾಫಿಲೋಕಾಕೈಗಳು ಸಾಮನ್ಯವಾಗಿ ಎಲು ಮಜ್ಜೆಯುರಿತವನ್ನುಂಟುಮಡುತ್ತವೆ. ಇದು ತೀವ್ರ (ಆಕ್ಯುಟ) ಇಲ್ಲವೆ ನಿಧಾನ (ಕ್ರಾನಿಕ್) ಸ್ವರೂಪದ್ದಾಗಿರಬಹುದು. ತೀವ್ರವಾಗಿದ್ದನ್ನು ಕೂಡಲೆ ಕಂಡು ಉಪಚರಿಸಿದರೆ ನಿಧಾನವಾಗುವದನ್ನು ತಡೆಗಟ್ಟಬಹುದಲ್ಲದೆ ಮಗುವಿನ ಪ್ರಾಣ ಹಾನಿಯನ್ನೂ ತಡೆಗಟ್ಟಬಹುದು. ನಿಧಾನ ರೋಗವಾಗಿ ಮಾರ್ಪಟ್ಟಾಗ ಕೀಲಿನೆಲುವು ಕರಗುತ್ತದೆ; ಒಂದು ಚೂರು ಆಥವಾ ದೊಡ್ಡದಾಗಿಯೇ ಎಲುಬು ಸಾಯುತ್ತದೆ ಇದಕ್ಕೆ ಹೊರಚಿಕ (ಸಿಕ್ವೆಸ್ಟ್ರಮ್) ಎನ್ನುತ್ತಾರೆ. ರಗಟೆಲುವಿನಲ್ಲಿ ತೂತುಗಳುಂಟಾಗಿ ಕೀವು ಸೋರುತ್ತದೆ. ಇಂದಿನ ದಿನಗಳಲ್ಲಿ ಇಂತಹದು ಕಾಣುವುದು ಆಪರೂಪ. ಪೆನಿಸಿಲಿನ್ ಅಲ್ಲದೆ ಅನೇಕ ಬಲಯುತವಾದ ಜೀವಿರೋಧಕ (ಅಂಟಿಬಯಟಿಕ) ಮದ್ದು ಲಭ್ಯವಾಗಿ ಚಿಕಿತ್ಸೆ ಸರಳವಾಗಿದೆ. ಕೆಲವೊಮ್ಮೆ ಶಸ್ತ್ರ್ರಕ್ರಿಯೆ ಆನಿವಾರ್ಯ.

ಗಂತಿಗಳು :	ಬೇರೆ ಬೇರೆ ಅಂಗಗಳಲ್ಲಿ ಗಂತಿಗಳು ಕಂಡುಬರುವಷ್ಟು ಮೂಳೆಗಳಲ್ಲಿ ಕಾಣಿಸುವುದು ಸಾಮಾನ್ಯವಲ್ಲ. ಮೂಳೆಯಗಂತಿಗಳಲ್ಲಿ ಹೆಚ್ಚಿನವು ಸೌಮ್ಯ (ಬಿನೈನ) ಗಂತಿಗಳಾಗಿರುತ್ತವೆ. ಮತ್ತು ಇವು ಶಸ್ತ್ರ ಕ್ರಿಯೆಗೆ ಮಣಿಯುತ್ತವೆ. ಪ್ರಾಥಮಿಕ ಗಂತಿಗಳಿಗಿಂತ ಗುಳೆಗಂತಿ (ಸೆಕೆಂಡರಿ) ಮೂಳೆಗಳಲ್ಲಿ ಸಾಮಾನ್ಯವಾಗಿ ಕಾಣಿಸುತ್ತವೆ. ಪುಪ್ಪುಸ, ಮುನ್ನಿಲುಗ (ಪ್ರಾಸ್ಟೇಟ್), ಗರ್ಭಕೋಶ, ತರಡು, ಕರುಳು ಮತ್ತಿತರ ಅಂಗಗಳ ಗಂತಿಗಳು ಮೂಳೆಗಳಿಗೆ ಹರಡುತ್ತವೆ, ನೋವುಂಟು ಮಾಡುತ್ತವೆ, ಅಂಗದ ಆಕಾರ ಕೆಡಿಸುತ್ತವೆ. ಇವುಗಳ ಚಿಕಿತ್ಸೆ ಕಷ್ಟವಾದರೂ ಇಂದು ವೈಜ್ಞಾನಿಕ ಪ್ರಗತಿಯಿಂದಾಗಿ, ವಿಕಿರಣ ಚಿಕಿತ್ಸೆ ಕಿಮೊಥೆರಪಿ ನೀಡಿ, ರಕ್ತ ಪೂರಣೆ ಕೊಟ್ಟು ಗಂತಿಯನ್ನು ಗಂತಿಯ ಕೆಡಕನ್ನು ನಿಯಂತ್ರಿಸಲು ಸಾದ್ಯವಾಗುತ್ತಿದೆ. 

	ಮೂಳೆಗಳಲ್ಲಿ ಪ್ರಾಥಮಿಕವಾಗಿ ಏಳುವ ಗಂತಿಗಳಿಗೆ ಮಾಂಸಗಂತಿ (ಸಾರ್ಕೋಮಾ) ಗಳೆನ್ನುತ್ತಾರೆ. ಎಲುಬಿನ, ಮೆಲ್ಲೆಲುವಿನ, ಮತ್ತು ತಂತುಗಳ ಪ್ರಬಲತೆಯಿರುವ ಮೂಳೆಯ ಗಂತಿಗಳನ್ನು ಗುರಿತಿಸಲಾಗಿದೆ. ಎಲುಜನಕ ಗಂತಿಯಲ್ಲಿ ಎಲುಬಿನ ಭಾಗವೇ ಪ್ರಮುಖವಾಗಿ ಕಾಣಿಸುತ್ತದೆ. ಇದು ಹದಿಹರೆಯದವರಲ್ಲಿ, ಸುಮಾರು ಎರಡು ದಶಕದ ವಯಸ್ಸಿನವರÀಲ್ಲಿ ಕಾಣಿಸುತ್ತದೆ. ಎಂತಹ ಪ್ರಬಲ ಉಪಚಾರದಿಂದಲೂ, ಅಂಗ ಕಳ ಕೊಂಡರೂ ಜೀವ ಬದುಕಿಸುವುದು ಕಷ್ಟವಾಗುತ್ತದೆ. 
ಇವಿಂಗ್ಸನ ಮಾಂಸಗಾಂತಿ, ಮೆಲ್ಲೆಲುವಿನಮಾಂಸಗಂತಿ, ತಂತುಮಾಂಸಗಂತಿಗಳು ವಿನಾಶಕಾರಕಗಳು. ಎಲುಬಿನಲ್ಲಿ ಮಧ್ಯವಯಸ್ಸಿನ ಸುಮಾರಿಗೆ ಕಾಣಿಸುವ ರಾಕ್ಷಸಕಣಗಂತಿ (ಆಸ್ಟಿಯೋಕ್ಲಾಸ್ಪೋಮಾ) ಸ್ಥಳೀಯವಾಗಿ ಕೆಲವೊಮ್ಮೆ ಅಪಾಯಕಾರಿಯಾಗಿ ಕಂಡರೂ ವ್ಯಕ್ತಿಯ ಜೀವಕ್ಕೆ ಅಪಾಯವಿರುವುದಿಲ್ಲ.

	ನೀರನಲ್ಲಿ ಪ್ಲೊರಿನ್ ಪ್ರಮಾಣ ಹೆಚ್ಚಾಗಿದ್ದಾಗ ಅದರ ಪರಿಣಾಮ ತಂತುಗಟ್ಟುಗಳಲ್ಲಿ ಮತ್ತು ಮೂಳೆ ಕೀಲುಗಳಲ್ಲಿ ಕಾಣುತ್ತೇವೆ. ಮಕ್ಕಳು ಇಂತಹ ನೀರನ್ನು ಕುಡಿಯುತ್ತಿದ್ದರೆ ಅವರ ಹಲ್ಲುಗಳು ಹಳದಿಯಾಗುತ್ತವೆ. ಸರಿಯಾಗಿ ಬೆಳೆಯುವುದಿಲ್ಲ. ಕಾಲುಗಳು ಬಾಗಿ ತಾಗುಮಂಡಿ ಇಲ್ಲವೆ ಪಂಗಡಗಾಲು ವಿಕಲತೆ ಫಲಿಸುತ್ತದೆ. ದೊಡ್ಡವರಲ್ಲಿ ಸೊಂಟನೋವು ಮೈಕೈನೋವು ಸಾಮಾನ್ಯ. ಎಕ್ಸ್‍ಕಿರಣದ ಚಿತ್ರದಿಂದ ಇದನ್ನು ಗುರುತಿಸಬಹುದು. ಇದಕ್ಕೆ ತಕ್ಕ ಚಿಕಿತ್ಸೆ ಇಲ್ಲ, ಪ್ಲೊರಿನ್ ಹೊಂದಿದ ನೀರಿನ ಬಳಕೆ ಬಿಡುವುದರಿಂದ ಇದು ಬರದಂತೆ ಮಾಡುವುದೇ ಉಪಾಯ.

ಮುರಿತಗಳು : ಮೈಯಲ್ಲಿ ಬಲುಗಟ್ಟಿಯಾದ ಊತಕ ಎಲುಬು. ಅದು ಮುರಿಯುವದು ಸಾಕಷ್ಟು ಬಲವಾದ ಪೆಟ್ಟಿನಿಂದ ಮಾತ್ರ. ಆದರೆ ರೋಗದಿಂದ ಮೆತ್ತಗಾದ ಮೂಳೆ, ಮುಪ್ಪಿನಿಂದ ತೆಳುವಾದ ಮೂಳೆ, ಹೆಂಗಸರಲ್ಲಿ ಮುಟ್ಟು ನಿಂತನಂತರದ ಬಲಹೀನ ಮೂಳೆಗಳು ಅಲ್ಪ ಸ್ವಲ್ಪ ಪೆಟ್ಟಿನಿಂದಾಗಿ ಮುರಿಯಬಹುದು. ಮುರಿದೆಲಬಿನ ತುದಿ ಚರ್ಮದ ಗಾಯದಿಂದ ಗಾಳಿಗೊಡ್ಡುವಂತಾದರೆ ಅದಕ್ಕೆ ತೆರೆದ ಮುರಿತ (ಒಪನ್) ಇಲ್ಲವೆ ಕಲೆತ ಮುರಿತ (ಕಂಪೌಂಡ್)ವೆನ್ನುತ್ತಾರೆ; ಇಲ್ಲವಾದರೆ ಆದು ಮುಚ್ಚಿದ ಮುರಿತ ಅಥವಾ ಸರಳ ಮುರಿತವಾಗುತ್ತದೆ. ಮೂಳೆಮುರಿತ ಕಂಡುಕೊಳ್ಳುವುದು ಕಷ್ಟವಾಗುವುದಿಲ್ಲ. ಪೆಟ್ಟಿಗೊಳಗಾದ ಭಾಗದಲ್ಲಿ ನೋವಿರುತ್ತದೆ. ಆ ಭಾಗ ಮುಟ್ಟಿನೋಡಲು ಬಿಡುವುದಿಲ್ಲ. ಮುರಿತದ ಭಾಗ ಅಲುಗಾಡಿಸಿದರೆ ಕರ್ ಕರ್ ಶಬ್ದ ಕೇಳಿಸಬಹುದು. ಇಲ್ಲವೆ ಪರೀಕ್ಷಿಸುವ ಕೈ ಅನುಭವಿಸಬಹುದು. ಮುರಿತಕ್ಕೊಳಗಾದ ಕೈ ಅಥವಾ ಕಾಲು ಡೊಂಕಾಗುತ್ತದೆ. ಎಕ್ಸರೇ ಚಿತ್ರ ಗಮನಿಸಿದರೆ ಎಲುಬು ಎಲ್ಲಿ ಮುರಿದಿದೆ, ಹೇಗೆ ಮುರಿದಿದೆ, ಯಾವ ಭಾಗಕ್ಕೆ ಮುರಿದೆಲುಬುಗಳು ಸರಿದಿವೆ ಎನ್ನುವ ವಿವರಗಳು ತಿಳಿಯುತ್ತವೆ. ಅದರಿಂದ ಮುರಿತದ ಚಿಕಿತ್ಸೆ ಸರಳವಾಗುತ್ತದೆ. 

ಮುರಿದೆಲುವು ಸರಿಕೂಡಿಸುವುದು; ಕೂಡಿಸಿದೆಲುಬುಗಳನ್ನು ಚೆನ್ನಾಗಿ ಕೂಡಿಕೊಳ್ಳುವತನಕ ಹಾಗೇ ಹಿಡಿದಿಡುವುದು, ಮತ್ತು ಅದೇ ಸಮಯದಲ್ಲಿ ಹಿಡಿದಿಡದ ಕೀಲುಗಳನ್ನು ಆಡಿಸುತ್ತಿರುವುದು ಎಲುಮುರಿತದ ಚಿಕತ್ಸೆಯ ಪ್ರಮುಖ ಅಂಶಗಳು. ಮಕ್ಕಳಲ್ಲಿ ಮೂಳೆಗಳು ಹಸಿರು ಕಡ್ಡಿಯಂತೆ (ಗ್ರೀನ್ ಸ್ಟಿಕ್) ಮುರಿದು ಬಾಗುತ್ತವೆ. ಮಕ್ಕಳ ಮೂಳೆ ಮುರಿದರೂ ಸರಿಕೂಡಿಕೊಳ್ಳುತ್ತವೆ. ಅಲ್ಪ ಸ್ವಲ್ಪ ದೋಷವಿದ್ದರೂ ಬೆಳೆಯುವ ಮೂಳೆಗಳಾದುದರಿಂದ ತಾನಾಗಿಯೇ ಸರಿಹೊಂದುತ್ತವೆ. ದೊಡ್ಡವರಲ್ಲಿ ಮುರಿದ ಮೂಳೆಗಳನ್ನು ಅರುವಳಿಕೆಯ ಸಹಾಯದಿಂದ ಸರಿಕೂಡಿಸಿ ಪ್ಲಾಸ್ಟ್‍ರ್ ಆಫ್ ಪ್ಯಾರಿಸ್ ಅಚ್ಚು (ಪ್ಲ್ಯಾಸ್ಟರಕಾಸ್ಟ್) ಹಾಕಿ ಕೆಲವು ವಾರಗಳ ವರೆಗೆ ಹಿಡಿದಿಡಬೇಕಾಗುತ್ತದೆ. ಸರಿಕೂಡಿಸಲು ಸಾಧ್ಯವಾಗದಾದಾಗ, ಅಥವಾ ಸಾಧ್ಯವಿಲ್ಲವೆನ್ನುವ ಸಂದರ್ಭಗಳಲ್ಲಿ ಶಸ್ತ್ರಕ್ರಿಯೆ ಮಾಡಿ, ಮುರಿದು ಸರಿದೆಲುವುಗಳನ್ನು ಸರಿಕೂಡಿಸಿ, ಕೂಡಿಸಿದ್ದನ್ನು ಒಳೆಲುಮಳೆ, (ಇಂಟ್ರಾಮೆಡುಲರಿನೇಲ್) ತಂತು; ತೂತುತಟ್ಟೆ (ಪ್ಲೇಟ್) ಯಿಂದ ಹಿಡಿದಿಡಬೇಕಾಗುತ್ತದೆ. ಇಂದಿನ ವ್ಯೆಜ್ಞಾನಿಕ ಪ್ರಗತಿಯ ದಿನಗಳಲ್ಲಿ ಶಸ್ತ್ರಕ್ರಿಯೆ ಸರಳವಾಗಿ ನಾನಾ ತರಹದ ಶಸ್ತ್ರಕ್ರಿಯೆಗಳು ಬಳಕೆಯಲ್ಲಿ ಬಂದು, ರೋಗಿ ಹಾಸಿಗೆ ಹಿಡದು ಮಲಗುವುದು ತಪ್ಪಿ ಸ್ಪಲ್ಪ ಸಹಾಯದೊಂದಿಗೆ ಆದಷ್ಟು ಕೂಡಲೇ ಸ್ವತಂತ್ರವಾಗಿ ಒಡಾಡುವಂತಾಗಲು ಸಾಧ್ಯವಾಗಿದೆ. 

	ಶಸ್ತ್ರ ಕ್ರಿಯೆಯಿಂದಾದ ಗಾಯ ಸೋಂಕಿಗೊಳಗಾಗಿ ಕೀವುಂಟಾಗುವುದು ಅಪರೂಪವಾಗಿದೆ. ಸ್ವಚ್ಛತೆ, ಕ್ರಿಮಿರಹಿತತೆ, ಜೀವಿರೋದಕ ಔಷಧಗಳು, ಶಸ್ತ್ರಕ್ರಿಯಾ ಕಲೆ, ಶಸ್ತ್ರಮಂದಿರ (ಆರೇಶನ್ ಥೇಟರ್)ದಲ್ಲಿಯ ಅನುಪಮ ಸೌಕರ್ಯಗಳು ಮತ್ತು ನುರಿತ ದಾದಿಯರ ಸಹಕಾರ ಎಂತಹದೇ ಗಂಭೀರವಾದ ಮೂಳೆ ಮುರಿತದ ಚಿಕಿತ್ಸೆಯನ್ನು ಸರಳಗೊಳಿಸಿವೆ. ರಷ್ಯಾದ ವೈದ್ಯ “ಎಲಿಜಾರೋವ್” ಮೂಳೆಯಲ್ಲಿ ತೆಳು ತಂತಿಗಳನ್ನು ಸೇರಿಸಿ ಆ ತಂತಿಗಳನ್ನು ಅಂಗಭಾಗದ ಹೊರಗೆ ಅರ್ಧ “ರಿಂಗ” ಗಳ ಮೂಲಕ ಹಿಡಿದು ಉಪಚರಿಸುವ ಪದ್ದತಿ ರೂಢಿಯಲ್ಲಿ ತಂದು ಮೂಳೆ ಚಿಕಿತ್ಸೆಯಲ್ಲಿ ಹೊಸತನ ನೀಡಿದ್ದಾರೆ. (ಚಿತ್ರದಲ್ಲಿ ತೋರಿಸಿರುವಂತೆ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ